Sunday, September 4, 2011

"ಮನದ ಮಾತು" ಪ್ರೀತಿಗಾಗಿ.

ದಿನಾಂಕ: ೧೪.೦೮.೨೦೦೮ ರಲ್ಲಿ ಹೀಗೆ ಒಂದು ಪತ್ರ ಬರೆದೆ ನನ್ನವಳಿಗಾಗಿ....... 
ನೀವು ಓದಿಬಿಡಿ...
ನಂತರ ಸುಮ್ಮನೆ ನಕ್ಕುಬಿಡಿ...

       ಮನದ  ಏದುಸಿರಿನಲ್ಲಿ ಏರುಪೇರಿಲ್ಲದೆ ಒಂದೇ ಸಮನೇ ಗಿರಕೆ ಹೊಡೆಯುವ ಕೆಲವು ನೆನಪುಗಳು ಅದ್ಯಾಕೊ ಈ ಜನ್ಮಕ್ಕೆ ಮುಗಿಯಲಾರವೇನೋ..?
ಮುಷ್ಠಿ ಗಾತ್ರದ ಹೃದಯದಲ್ಲಿ ಅದೆಷ್ಟು ಕೋಟಿ ಕೋಟಿ ಕನಸ್ಸುಗಳು ಪೈಪೋಟಿಯಲ್ಲಿ ಸಾಲು ಸಾಲಾಗಿ ನಿಂತು ನಾ ಮುಂದು ತಾ ಮುಂದು ಅಂತ ಕಿತ್ತಾಡುತ್ತಿವೆ ಎಂದರೇ....? ಹೇಳಿಬಿಡಲು ನನಗೆ ನಾಚಿಕೆ ಅನಿಸಿಬಿಡಬಹುದು!.
        ಅದೃಷ್ಟ ಎನ್ನುವ ವಿಧಿ ಬರಹದಲ್ಲಿ ಅದೃಶ್ಯರಾಗಿ ಉಳಿದುಬಿಡುವ ಕೆಲವು ಸವಿನೆನಪುಗಳನೊತ್ತ ಕೆಲವು ಮನಸ್ಸುಗಳು ಯಾರದೊ ಒತ್ತಡಕ್ಕೆ ಮಣಿದು ಕಂಡು ಕಾಣದಂತೆ, ಕೇಳಿಯು ಕೇಳದಂತೆ, ಅತ್ತರೂ ನಕ್ಕಂತೆ ನಟಿಸಿ ನಡೆದು ಬಿಡುವ ವಿಪರ್ಯಾಸದ ಸುಳಿಯಲ್ಲಿ ಸಿಲುಕಿ ನಲುಗುವ ಪರಿಯ ನೀ ಅರಿಯಲಾರಯಾ ದೈವವೇ...?
        ಈ ದುಃಖ, ಸಂತೋಷ ಅಥವಾ ಮನದ ತಿಳಿ ಭಾವನೆಗಳನ್ನು ಬಗೆದು ಬಗೆದು ಹಂಚಿಬಿಡುವ ಆಗಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಅಲ್ವಾ?!! ಕೈಗೆ ಸಿಕ್ಕಿದ್ದಷ್ಟು ಬಾಚಿ ಬಾಚಿ ಹಂಚಿ ಹಗುರಾಗಿ ಬಿಡಬಹುದಿತ್ತೇನೋ..! ಈ ಒಂದು ಸಣ್ಣ ಮನದ ಪುಟ್ಟ ಹೃದಯ ಕೋಣೆಯಲ್ಲಿ ಅದೆಷ್ಟು ಅಂತ ತುಂಬಿಸಿಕೊಳ್ಳೊದು?
              ನಡೆದು ಬಂದ ದಾರಿಯನ್ನು ಮರೆತುಬಿಡಬಹುದು,
              ಇಟ್ಟ ಹೆಜ್ಜೆ ಗುರುತನ್ನ ಅಳಿಸಿಬಿಡಬಹುದು, 
ಆದರೆ....
               ಸುಮಧುರ ಸಿಹಿ ನೆನಪುಗಳನ್ನೂ........???
" ಎತ್ತ ಹೊರಟೆ ಮನಸ್ಸೆ?
ನಿನ್ನ ಕಟ್ಟಿ ಹಾಕಿರುವುದು ದೈವ!
ಸುಟ್ಟುಬಿಡುವೆಯಾ... ನಿನ್ನೆಲ್ಲ ಕನಸ್ಸಾ?
ಇತ್ತ ಸಾಯಲು ಆಗದೆ
ಇತ್ತ ಬದುಕಲು ಆಗದೆ
ಹೆಣಗಾಡಿದೆ ನೆನಪುಗಳನ್ನೊತ್ತ ಈ ಜೀವ!

ಬಾಡಿ ಹೋಗುವ ಹೂವಾಗಿದ್ದರೆ ಚೆಂದ
ಕರಗಿ ಹೋಗುವ ಮೋಡವಾಗಿದ್ದರೆ ಚೆಂದ
ಒಣಗಿ ಹೋಗುವ ತರಗೆಲೆಯಾಗಿದ್ದರೂ.. ಚೆಂದ
ಮಾತು ಬಾರದಿರುವ ಮೂಖ ಪ್ರಾಣಿಯಾಗಿದ್ದರೂ ಚೆಂದ
ಆದರೆ ಗರಿಗೆದರಿ ನೋವುಗಳಿಗೆ ನೀರೇರೆದು ಹುರಿದುಂಬಿಸುವ ’ನೆನಪುಗಳಿಗೆ’
ಜೀವವಿತ್ತು ತಮಷೆ ಮಾಡುವ ಪರಿಯಂತ ಚೆಂದ?????
   
ಹಾಯ್..... 
              ಕ್ಷಮಿಸು ಏನೇನೋ...ಬರೆದು ಬಿಟ್ಟೆ ಅನಿಸುತ್ತೆ!!
 ನಿನ್ನ ಬದುಕಿನೊಳಗೆ ನಾನು ಬರಬಾರದಿತ್ತು ಆದರೆ ನಿನ್ನನ್ನು ಕೇಳದೆ ಬಂದುಬಿಟ್ಟೆ ದಯವಿಟ್ಟಿ ಕ್ಷಮೆ ಇರಲಿ, ನನ್ನ ಮಂಕು ಕವಿದ ಮಂದ ಬುದ್ಧಿಯಿಂದ ನಿನ್ನ ಸ್ನೇಹ ಕೊಂಡಲಿಗಳಿಗೆ ಕೊಡಲಿಯಾದೆ ದಯಮಾಡಿ ಕ್ಷಮಿಸಿಬಿಡು, ನಿನ್ನನ್ನು ಒಂದೇ ಒಂದು ಮಾತು ಕೂಡ ಕೇಳದೆ ನನ್ನೆದೆಯಲ್ಲಿ ನಿನ್ನೆಸರ ಪುಟ್ಟ ಅಲ್ಲ ಅಲ್ಲ ಬಲು ದೊಡ್ಡ... ಬಹಳ ದೊಡ್ಡ ಪ್ರೇಮ ಮಂದಿರವನ್ನು ನಾನೆ ಸ್ವತಃ ನಿರ್ಮಿಸಿಬಿಟ್ಟೆ, ಅದು ತಪ್ಪಲ್ಲ! ಆದರೆ ಅಲ್ಲಿ ನೀನು...ನೀನೊಬ್ಬಳೇ.. ಇರಬೇಕು ಅಂತ ಕನಸ್ಸು ಕಂಡೆ ಕೃಪೆತೋರಿ ಮನ್ನಿಸಿಬಿಡು.
      ಇಷ್ಟೆಲ್ಲ ತಿಳಿದ ಮೇಲೆ ನಿನಗೆ ಅನ್ನಿಸಿರಬಹುದು  ಅವನು ನನ್ನನ್ನು ಪ್ರೀತಿಸುತ್ತಿದ್ದಾನೆ ಅಷ್ಟೆ ಅಂತ ಆದರೆ  ಈ ನನ್ನ ಎದೆಯ ಗರ್ಭಗುಡಿಯಲ್ಲಿ ನಿನ್ನದೊಂದೇ.. ಸಾಮ್ರಾಜ್ಯ ಅದನ್ನು ಆಳುವ ನೆನಪಿನ ದೊರೆ ನಾನೊಬ್ಬನೆ ನಾನೊಬ್ಬನೆ ಅಲ್ಲಿಗೆ ಯಾವುದೇ ನರಪಿಳ್ಳೆಗೂ ಪ್ರವೇಶವಿಲ್ಲ ಅಲ್ಲಿ ನೀನು ಮಾತ್ರ ಪ್ರತಿಸ್ಥಾ ಪನೆಗೊಂಡಿರುವವಳು ಮತ್ಯಾರೆ ಬಂದರು ಗುಡಿಯ ಬಾಗಿಲಲ್ಲಿ ನಿಂತು ಹೋಗಬೇಕಷ್ಟೆ.
           ಪಾಪು! ಪ್ರೀತಿ ಎನ್ನುವ ಎರಡುವರೆ ಅಕ್ಷರವನ್ನಾ ನಿನಗೆ ತಿಳಿಯದಲೆ ಅದೆಷ್ಟು ಅಂದವಾಗಿ, ಅದ್ಭುತವಾಗಿ ಕೆತ್ತಿಬಿಟ್ಟೆ? ನಿಜಕ್ಕೂ ಈ ಜನ್ಮದಲ್ಲಿ ಮರೆಯಲಾಗದ, ತೊರೆಯಲಾಗದ ’ಪ್ರೀತಿ’ ಎಂದರೆ..... ಅದು ನೀನು ಮಾತ್ರ.
ಈ ಎರಡುವರೆ ಅಕ್ಷರದಲ್ಲಿ ಸ್ವಲ್ಪ ಕೂಡ ಕದಿಯುವ ಯಾವ ಜೀವಿ ಕೂಡ  ಈ ಭೂಮಿಯಲ್ಲಿ ಹುಟ್ಟಿರಲಾರದು ಎನಿಸುತ್ತದೆ. ನನ್ನ ಅಮಾಯಕ ಎದೆಯಲ್ಲಿ ನೀ ಬರೆದ ಪ್ರೀತಿ ಪುಟಗಳು  ಈ ಜನ್ಮ ಅಲ್ಲ ಇನ್ನಾವ ಜನ್ಮದಲ್ಲೂ ನಾಶವಾಗಲಾರವು. ನನ್ನ ಬದುಕಿನ ಪ್ರೇಮ ಪುಸ್ತಕದಲ್ಲಿ ಮೊದಲನೆ ಸಾಲಿನ ಮೊದಲನೆ ಪದವಾದ ನಿನಗೆ ನನ್ನ ಹೃದಯ ಪೂರ್ವಕ ಅಭಿನಂದನೆಗಳು.
                                     ತಿಳಿದೊ, ತಿಳಿಯದೆಯೋ ನನ್ನಿಂದ ಏನಾದರೂ ನೋವಾಗಿದ್ದಲ್ಲಿ ದಯವಿಟ್ಟು ಕ್ಷಮಿಸಿಬಿಡು, ನೀನು ಸಿಗಲಿಲ್ಲವಲ್ಲ ಅನ್ನುವ ನೋವು ನನ್ನಲ್ಲಿರಬಹುದು ಆದರೆ ಅದು ನಿನ್ನ ಸಂತೋಷಕ್ಕೆ, ನಿನ್ನ ನೆಮ್ಮದಿಗೆ ಎಂದೆಂದೂ ಕೆಡಕು ಬಯಸುವುವಂತದ್ದಲ್ಲ........
         ಈ ಭೂಮಿಯಲ್ಲಿ ಬಹಳ ಅಪರೂಪ ಎನ್ನುವುದೆಲ್ಲ  ನಿನ್ನದಾಗಲಿ ಎನ್ನುವ ಬಯಕೆ ನನ್ನದು.
        ತುಡಿತ ತುಂಬಿದ ಬಡಿತದಲ್ಲಿ ನೋವುಗಳಿಲ್ಲದ ಬದುಕು ನಿನ್ನದಾಗಲಿ ಎನ್ನುವ ಆಸೆ ನನ್ನದು.
       ಅಂದ ಚಂದದೊಂದಿಗೆ ಬಂದಿಯಾದ ಆನಂದವೆಲ್ಲ ನಿನ್ನೊಬ್ಬಳಿಗೆ ಸಿಗಲಿ ಎನ್ನುವ ಸ್ವಾರ್ಥ ನನ್ನದು.
ನಿನ್ನ ಇಷ್ಟದಂತೆ ನಿನ್ನ ಬದುಕೆಲ್ಲ ಬಂಗಾರವಾಗಲಿ ಎಂದು ಹಾರೈಸುತ್ತಾ....................
                                                                                  ..............ಬಸು"

2 comments:

  1. ನೊಂದಿರೋ ಮನಸ್ಸಿನಿಂದ ಪ್ರೀತಿ ತುಂಬಿದ ಹಾರೈಕೆ..! Wow.., Suprb Bro...

    ReplyDelete